ಅಹಮದ್ ನಗರ
ಮಹಾರಾಷ್ಟ್ರದ ಒಂದು ಪ್ರಮುಖ ಜಿಲ್ಲೆ ಹಾಗೂ ನಗರ. ಈ ನಗರ ಸೀನಾ ನದಿಯ ದಂಡೆಯ ಮೇಲಿದೆ (190 5 ಉತ್ತರ ಅಕ್ಷಾಂಶ 740 55 ಪೂರ್ವ ರೇಖಾಂಶ). ಜನಸಂಖ್ಯೆ 1,19,020 (1961). ಬೊಂಬಾಯಿಗೆ 218 ಮೈ. ದೂರದಲ್ಲಿದೆ. ಪೂನಾ ವಿಭಾಗದ ಮಿಲಿಟರಿ ಠಾಣ್ಯವಾಗಿದೆ. 
ಹತ್ತಿ ಹಾಗೂ ರೇಷ್ಮೆ ವ್ಯಾಪಾರಕ್ಕೆ ಕೇಂದ್ರವೆನಿಸಿದೆ. ಹತ್ತಿಯನ್ನು ನೇಯುವ ಮತ್ತು ಬಣ್ಣ ಹಾಕುವ ಗಿರಣಿಗಳುಂಟು.
ಜಿಲ್ಲೆಯಲ್ಲಿ ಮಳೆ ಕಡಿಮೆ. ಪ್ರದೇಶ ಬಂಜರು. ವಿಸ್ತೀರ್ಣ 6,472 ಚ.ಮೈ. ಜನಸಂಖ್ಯೆ 15,88,654 (1961). ಜಿಲ್ಲೆಯ ಉತ್ತರ ಭಾಗದಲ್ಲಿ ಗೋದಾವರಿ ಹಾಗೂ ಉಪನದಿಗಳಾದ ಪಾರವಾರ ಮತ್ತು ಮೂಲಾ ಹರಿಯುತ್ತವೆ. ಇತರ ನದಿಗಳೆಂದರೆ ಡಾರ್, ಸೇಫಾನಿ, ಭೀಮಾ, ಹಾಗೂ ಗೋರ್. ಹತ್ತಿ, ಗೋಧಿ, ದ್ವಿದಳ ಧಾನ್ಯಗಳು ಇಲ್ಲಿಯ ಪ್ರಮುಖ ಬೆಳೆಗಳು.     
 
(ಎಂ.ಎಸ್.)

ಅಹಮದ್‍ನಗರದ ಚರಿತ್ರೆ ಸ್ವಾರಸ್ಯಕರವಾಗಿದೆ. ನಿಜಾಮ್‍ಶಾಹಿ ವಂಶದ ಸಂಸ್ಥಾಪಕ ಅಹಮದ್ ನಿಜಾಮ್ ಷಾ ಬಹಮನಿ ಸೈನ್ಯವನ್ನು ಸೋಲಿಸಿ ಪಡೆದ ವಿಜಯದ ಸ್ಮಾರಕವಾಗಿ 1494ರಲ್ಲಿ ಅದೇ ಸ್ಥಳದಲ್ಲಿ ಒಂದು ನಗರ ಸ್ಥಾಪನೆ ಮಾಡಿ ಅದಕ್ಕೆ ಅಹಮದ್ ನಗರ ಎಂದು ಹೆಸರಿಟ್ಟು ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ನಗರ ಬಹು ಬೇಗ ಅಭಿವೃದ್ಧಿಗೆ ಬಂತು. ನಗರದ ಮೇಲೆ ದಂಡೆತ್ತಿ ಬಂದಿದ್ದ ಅನೇಕ ಬಲಿಷ್ಠ ಶತ್ರುಗಳ ಪೈಕಿ ಬಿಜಾಪುರದ ಅಲಿ ಆದಿಲ್ ಷಾ ಮತ್ತು ಚಾಮರಾಜ ಮುಖ್ಯರು. ಇವರೂ ನಗರವನ್ನು ಸ್ವಾಧೀನಪಡಿಸಿಕೊಳ್ಳಲಾರದೆ ಸೋಲನ್ನೊಪ್ಪಿಕೊಳ್ಳಬೇಕಾಯಿತು. 1594ರಲ್ಲಿ ಮೊಗಲರ ಸೇನೆಯ ಮೇಲೆ ಚಾಂದ್‍ಬೀಬಿ ಕಾದಾಡಿ ಕೊನೆಗೆ ಒಪ್ಪಂದ ಮಾಡಿಕೊಂಡಳು. ಆದರೆ 1599ರಲ್ಲಿ ನಗರ ಮೊಗಲರ ವಶವಾಯಿತು. ಚಾಂದ್‍ಬೀಬಿ ತನ್ನ ಅಧಿಕಾರಿಗಳಿಂದಲೇ ಕೊಲ್ಲಲ್ಪಟ್ಟಳು. ಔರಂಗಜೇಬ ತನ್ನ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದ. 1759ರಲ್ಲಿ ಮೊಗಲ ಅಧಿಕಾರಿ ಲಂಚ ಸ್ವೀಕರಿಸಿ ಬಾಲಾಜಿ ಬಾಜಿರಾಯನಿಗೆ ಅಹಮದ್‍ನಗರವನ್ನು ಬಿಟ್ಟುಕೊಟ್ಟ. 1797ರಲ್ಲಿ ಎರಡನೆಯ ಬಾಜೀರಾಯ ತನಗೆ ಸಲ್ಲಿಸಿದ ಸೇವೆಗಾಗಿ ಅದನ್ನು ಸಿಂಧೆಗೆ ಬಿಟ್ಟುಕೊಟ್ಟ. ಆದರೆ ಬೇಸಿನ್ ಒಪ್ಪಂದದ ತರುವಾಯ ಇಂಗ್ಲೀಷರು ಎರಡನೆಯ ಮರಾಠಯುದ್ಧದಲ್ಲಿ ಅಹಮದ್‍ನಗರವನ್ನು ತಮ್ಮ ವಶಕ್ಕೆ ದೊರಕಿಸಿಕೊಂಡು ಮುಂದಣ ಕಾರ್ಯಕ್ಕೆ ಅನುಕೂಲಮಾಡಿಕೊಂಡರು. 1817ರಲ್ಲಿ ಪುಣೆ ಒಪ್ಪಂದದ ಪ್ರಕಾರ ನಗರ ಬ್ರಿಟಿಷರ ವಶವಾಯಿತು.

ಹಳೆಯ ಕೋಟೆ, ಮಲಿಕ್ ಅಹಮದ್‍ನ (1490 -1508) ಅರಮನೆ, ಬುರ್ಹಾನ್ ನಿಜಾಮ್ ಷಾನ (1508 -1555) ಕಾಲದ ರುಮಿ ಶಾನ್‍ನ ಮಸೀದಿ, ರುಮಿಶಾನ್‍ನ ಗೊರಿ, ಕಾಲಿಮಸೀದಿ (ಈಗಿನ ಜಿಲ್ಲಾಧಿಕಾರಿಗಳ ಕಛೇರಿ), 1579ರಲ್ಲಿ ಕಟ್ಟಿದ ನ್ಯಾಮತ್‍ಖಾನನ ಅರಮನೆ ಮತ್ತು ಮಸೀದಿಯ ಅವಶೇಷಗಳು, ಒಂದನೆ ಮರ್ತಜಾನಿಜಾಮ್ ಷಾನ (ಕ್ರಿ.ಶ. 1565 -1581) ಕಾಲದ ಸಲಾಬತ್‍ಖಾನನ ಗೋರಿ ಮುಂತಾದ 16ನೆಯ ಶತಮಾನದ ಅನೇಕ ಪ್ರಾಚೀನ ಕಟ್ಟಡಗಳು ಇಲ್ಲಿ ಇವೆ.

(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ